ಲಂಕೇಶರ 'ಅವ್ವ' : ನಿಜದೆಡೆಗಿನ ಉಲ್ಲಂಘನೆ
ಒಬ್ಬ ಭಾಷಾ ಪ್ರಾಧ್ಯಾಪಕರಾಗಿ, ಸಾಹಿತಿಯಾಗಿ, ಪತ್ರಕರ್ತರಾಗಿ ಮತ್ತು ಚಿತ್ರರಂಗದಲ್ಲಿನ ತಮ್ಮದೇ ಆದ ಪ್ರಯೋಗಗಳಿಂದಾಗಿ ಒಂದಿಡೀ ತಲೆಮಾರಿನ ವ್ಯಕ್ತಿತ್ವವನ್ನು ರೂಪಿಸಿದಂಥವರು ಲಂಕೇಶರು. ಹಾಗಾಗಿಯೇ ಅವರು ವರ್ತಮಾನದೊಂದಿಗೂ ಸದಾ ಬೆಸೆದುಕೊಳ್ಳುವಂಥ ವ್ಯಕ್ತಿತ್ವ.
ಪಿ ಲಂಕೇಶ್ ತಮ್ಮದೇ ಆದ ಒಂದು ದಾರಿಯನ್ನು ತೆರೆದಂಥವರು. ಸಾಹಿತ್ಯದಲ್ಲಿ ಅವರು ತೆರೆದ ದಾರಿ ಒಂದು ರೀತಿಯದ್ದಾದರೆ, ಪತ್ರಿಕೋದ್ಯಮದಲ್ಲಿ ಟ್ಯಾಬ್ಲಾಯ್ಡ್ ಪತ್ರಿಕೋದ್ಯಮಕ್ಕೆ ಒಂದು ಘನತೆಯನ್ನು ತಂದುಕೊಟ್ಟಿದ್ದವರು ಅವರು. ಇಂದು ಟ್ಯಾಬ್ಲಾಯ್ಡ್ ಪತ್ರಿಕೋದ್ಯಮ ಮಾತ್ರವಲ್ಲ, ಇಡೀ ಪತ್ರಿಕೋದ್ಯಮವೇ ಏನು, ಏನಾಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತು. ಆದರೆ ಆ ಕಾಲದಲ್ಲಿಯೇ ಟ್ಯಾಬ್ಲಾಯ್ಡ್ ಪತ್ರಿಕೋದ್ಯಮಕ್ಕೆ, ಪೀತ ಪತ್ರಿಕೋದ್ಯಮ ಎಂಬ ಹೆಸರನ್ನೇ ಅಳಿಸಿಹಾಕುವಂತೆ ಒಂದು ಸಾಂಸ್ಕೃತಿಕ ಆಯಾಮವನ್ನು ಲಂಕೇಶ್ ತಂದುಕೊಟ್ಟಿದ್ದರು.
ಯಾಕೆ ಇದೆಲ್ಲ ಸಾಧ್ಯ ಆಗುತ್ತದೆ? ನಾನು ಕೇಳಿರುವೆ. ಲಂಕೇಶ್ ಅವರು ತುಂಬ ಸಂಕೋಚದ ಸ್ವಭಾವದವರಾಗಿದ್ದರು ಎಂದು. ಈ ಸಂಕೋಚ, ಈ ಲಜ್ಜೆ ಅನ್ನುವುದು ನಮ್ಮ ಇಡೀ ವ್ಯಕ್ತಿತ್ವವನ್ನು ರೂಪಿಸುವಂಥದ್ದು. ಕೊಂಚವಾದರೂ ಲಜ್ಜೆ ಇರುವವನಿಗೇ ತನ್ನನ್ನು ತಾನು ವಿಮರ್ಶಿಸಿಕೊಳ್ಳಬಲ್ಲ ತಾಕತ್ತು ಇರುವುದಕ್ಕೆ ಸಾಧ್ಯ. ಲಂಕೇಶರ ವ್ಯಕ್ತಿತ್ವವನ್ನು ನಾವು ಈ ಬಗೆಯಲ್ಲಿ ನೋಡಬೇಕು. ಹಾಗೆ ಆತ್ಮವಿಮರ್ಶಕನಾಗಿ ಇರುವವನು ಆತ್ಮಾಭಿಮಾನವನ್ನೂ ಕಲಿಸುತ್ತಾನೆ. ಇವತ್ತು ಆತ್ಮಾಭಿಮಾನದ ಹೆಸರಲ್ಲಿ ನಾವೇನು ಕೇಳಿಸಿಕೊಳ್ಳುತ್ತಿದ್ದೇವೆಯೊ ಅದರಲ್ಲಿ ಸದ್ದು ಮಾತ್ರ ಇದೆಯೇ ಹೊರತು ಆತ್ಮ ಇಲ್ಲ. ಆತ್ಮ ಸದ್ದಿನಲ್ಲಿ ಇರುವುದಿಲ್ಲ. ಅದು ಮೌನದೊಂದಿಗಿನ ಅನುಸಂಧಾನ; ಅದು ಅನುನಯದೊಂದಿಗಿನ ಅನುಸಂಧಾನ. ಅಲ್ಲಿ ಮಾತ್ರ ಒಂದು ಧ್ಯಾನ, ಒಂದು ಸಾಂಸ್ಕೃತಿಕ ಕಾಳಜಿ, ಕಳಕಳಿ ಸಾಧ್ಯ. ಮತ್ತು ಅಷ್ಟೇ ಪ್ರಖರತೆ ಕೂಡ ಅಲ್ಲಿಂದಲೇ ಮೂಡಿಬರುವುದು. ಯಾಕೆಂದರೆ, ಎಲ್ಲಿ ಯಾವ ಮುಲಾಜೂ ಇರುವುದಿಲ್ಲವೊ, ಮನಸ್ಸು ಎಲ್ಲಿ ಭ್ರಷ್ಟ ಆಗಿರುವುದಿಲ್ಲವೊ ಅಲ್ಲಿಯೇ ಪ್ರಖರತೆಯೂ ಇರುತ್ತದೆ. ಅಂಥ ಪ್ರಖರತೆಯನ್ನು ಲಂಕೇಶ್ ಅವರಲ್ಲಿ ನಾವು ಕಾಣುತ್ತೇವೆ.
ಲಂಕೇಶ್ ಅವರ ಪತ್ರಿಕೋದ್ಯಮ, ಅವರ ಸಾಹಿತ್ಯ, ಚಿತ್ರರಂಗದಲ್ಲಿನ ಬೇರೆ ಬೇರೆ ಬಗೆಯ ಅವರ ಪ್ರಯತ್ನಗಳು ಇಲ್ಲೆಲ್ಲ ನಾವು ಕಾಣುವುದು ಒಂದು ಆಳವಾದ ಜೀವನಪ್ರೀತಿ. ಇಂಥ ಜೀವನ ಪ್ರೀತಿ, ಈ ಲವಲವಿಕೆ ಸಾಧ್ಯವಾಗುವುದು ಮನಸ್ಸು ನಿಸ್ಪೃಹವಾಗಿರುವಲ್ಲಿ. ರಾಜಕಾರಣ ಅಲ್ಲಿ ಇಲ್ಲದೇ ಇದ್ದಾಗ. ಅಥವಾ ರಾಜಕಾರಣವನ್ನು ಕಟುವಾಗಿ ವಿಮರ್ಶಿಸಬಲ್ಲ ಶಕ್ತಿ ಆಂತರ್ಯದೊಳಗೆ ಇದ್ದಾಗ. ನಮ್ಮ ಸುತ್ತಲೂ ಇವತ್ತೂ ರಾಜಕಾರಣ ಇದೆ, ಅವತ್ತೂ ರಾಜಕಾರಣ ಇತ್ತು. ಅವೆಲ್ಲವನ್ನು, ಅಲ್ಲಿನ ವಿಲಕ್ಷಣ ಅಡ್ಡಿ-ಆತಂಕಗಳನ್ನು ಮೀರಿ, ನಿವಾರಿಸಿಕೊಂಡು ಬೆಳೆದಂಥವರು ಲಂಕೇಶ್.
ಇದೆಲ್ಲದರ ಹಿನ್ನೆಲೆಯಲ್ಲಿ ನನಗೆ ಲಂಕೇಶ್ ಅವರು ಸಿನಿಮಾಗಳಿಗೆ ಬರೆದ ಹಾಡುಗಳ ಬಗ್ಗೆ ಗಮನ ಹರಿಸಬೇಕು ಎನ್ನಿಸುತ್ತದೆ. ಅವರು ಸುಮಾರು ಹತ್ತು ಹಾಡುಗಳನ್ನು ಚಿತ್ರಗಳಿಗಾಗಿ ಬರೆದರು. ಎಲ್ಲರಿಗೂ ಗೊತ್ತಿರುವ ಹಾಡುಗಳು ಮೂರು. ಎಲ್ಲಿಂದಲೋ ಬಂದವರು, ಪಲ್ಲವಿ ಅನ್ನೋ ಸಿನಿಮಾಗಳಿಗೆ ಬರೆದಂಥವು. ಕೆಂಪಾದವೋ ಎಲ್ಲ ಕೆಂಪಾದವೋ, ಎಲ್ಲಿದ್ದೆ ಇಲ್ಲೀತಂಕ ಎಲ್ಲಿಂದ ಬಂದ್ಯವ್ವ, ಕರಿಯವ್ನ ಗುಡಿತಾವ ಅರಳ್ಯಾವೆ ಬಿಳಿಹೂವು ... ಈ ಹಾಡುಗಳನ್ನು ಕೇಳಿಸಿಕೊಳ್ಳುತ್ತಿದ್ದರೆ ಸಾಕು. ಒಂದಿಡೀ ವಾತಾವರಣವೇ ಸೃಷ್ಟಿಯಾಗುತ್ತದೆ. ಲಂಕೇಶರು ಸಿನಿಮಾಕ್ಕೆ ಬರೆದ ಹಾಡುಗಳು ಯಾಕೆ ತುಂಬ ಕಾಡುತ್ತವೆ ಎಂದರೆ, ಅವನ್ನು ಸಿನಿಮಾದಿಂದ ತೆಗೆದು ಬದಿಗಿಟ್ಟರೂ ಅವಕ್ಕೆ ಅವುಗಳದ್ದೇ ಆದ ಪ್ರಾಣ, ಹೃದಯ, ಮಿಡಿತ ಇರುವುದನ್ನು ಗಮನಿಸಬಹುದು. ಆ ಹಾಡುಗಳು ಕಟ್ಟಿಕೊಡುವ ಆರ್ದ್ರತೆ ಇಂದಿನ ಸಾಹಿತ್ಯದಲ್ಲಿ ಇಲ್ಲವಾಗಿದೆ. ಎಲ್ಲವೂ ಶುಷ್ಕ, ಎಲ್ಲವೂ ಲೆಕ್ಕಾಚಾರ ಆಗಿರುವ ಕಾಲಘಟ್ಟ ಇದು.
ಇಂದು ಪ್ರಶಸ್ತಿಗಾಗಿ ಕೈಚಾಚಿ, ಸಲಾಮು ಹೊಡೆದು ನಿಲ್ಲುವ ಸಾಹಿತಿಗಳು, ಪತ್ರಿಕೋದ್ಯಮವನ್ನು ಒಂದು ದಂಧೆ ಎಂದುಕೊಂಡಿರುವ ಪತ್ರಕರ್ತರು, ಸಿನಿಮಾದ ಹೆಸರಲ್ಲಿ ಕೋಟಿಗಟ್ಟಲೆ ಎಣಿಸುವವರು ಲಂಕೇಶ್ ಅವರನ್ನು, ಅವರಂಥವರನ್ನು ನೆನೆಸಿಕೊಳ್ಳಬೇಕು. ಲಂಕೇಶರ ಇತಿಮಿತಿಗಳ ಬಗ್ಗೆಯೆಲ್ಲ ನಾನು ಮಾತನಾಡುವುದಿಲ್ಲ. ಲಂಕೇಶರನ್ನು ಅವರ ಬರಹಗಳ ಮೂಲಕ ಕಂಡುಕೊಂಡವನಾಗಿ ನನಗೆ ಅನಿಸಿದ್ದು ಇದು. ಅವರು ತಮ್ಮ ಬರವಣಿಗೆ ಮೂಲಕ ಕೊಟ್ಟ ದರ್ಶನ ಯಾವ ಕಾಲಕ್ಕೂ ದೊಡ್ಡದು.
ಲಂಕೇಶರ ‘ಅವ್ವ’ ಕವಿತೆ ಕುರಿತ ನನ್ನ ಗ್ರಹಿಕೆಗೆ ಪೂರ್ವಭಾವಿಯಾಗಿರುವ ಈ ಮಾತುಗಳಲ್ಲಿ ಪ್ರಸ್ತಾಪಿಸಿರುವ ಸಂಕೋಚ, ಸ್ವಾಭಿಮಾನ, ಪ್ರಖರತೆ ಮತ್ತು ಆರ್ದ್ರತೆ ‘ಅವ್ವ’ ಕವಿತೆಯಲ್ಲೂ ನುಡಿಯುತ್ತವೆ. ಮನುಷ್ಯ ಸಂಬಂಧವು ಲಂಕೇಶರ ಬರವಣಿಗೆಯಲ್ಲಿ ಬರೀ ವಸ್ತುವಾಗದೆ ಪ್ರಾಣವೇ ಆಗುವ ನೆಲೆಯಿಂದಲೂ ಈ ಪದ್ಯವು ವಿಶಿಷ್ಟವಾದುದು.
~
ನನ್ನವ್ವ ಫಲವತ್ತಾದ ಕಪ್ಪು ನೆಲ ಅಲ್ಲಿ ಹಸಿರು ಪತ್ರದ ಹರವು, ಬಿಳಿಯ ಹೂ ಹಬ್ಬ; ಸುಟ್ಟಷ್ಟು ಕಸುವು, ನೊಂದಷ್ಟೂ ಹೂ ಹಣ್ಣು ಮಕ್ಕಳೊದ್ದರೆ ಅವಳ ಅಂಗಾಂಗ ಪುಲಕ; ಹೊತ್ತ ಬುಟ್ಟಿಯ ಇಟ್ಟು ನರಳಿ ಎವೆ ಮುಚ್ಚಿದಳು ತೆರೆಯದಂತೆ.
ಪಲ್ಲ ಜೋಳವ ಎತ್ತಿ ಅಪ್ಪನ್ನ ಮೆಚ್ಚಿಸಿ ತೋಳ ಬಂದಿಯ ಗೆದ್ದು, ಹೆಂಟೆಗೊಂಡು ಮೊಗೆ ನೀರು ಹಿಗ್ಗಿ; ಮೆಣಸು, ಅವರೆ, ಜೋಳ, ತೊಗರಿಯ ಹೊಲವ ಕೈಯಲ್ಲಿ ಉತ್ತು, ಹೂವಲ್ಲಿ ಹೂವಾಗಿ, ಕಾಯಲ್ಲಿ ಕಾಯಾಗಿ ಹಸುರು ಗದ್ದೆಯ ನೋಡಿಕೊಂಡು, ಯೌವನವ ಕಳೆದವಳು ಚಿಂದಿಯ ಸೀರೆ ಉಟ್ಟುಕೊಂಡು.
ಸತ್ತಳು ಈಕೆ: ಬಾಗು ಬೆನ್ನಿನ ಮುದುಕಿಗೆಷ್ಟು ಪ್ರಾಯ? ಎಷ್ಟುಗಾದಿಯ ಚಂದ್ರ, ಒಲೆಯೆದುರು ಹೋಳಿಗೆಯ ಸಂಭ್ರಮ? ಎಷ್ಟು ಸಲ ಈ ಮುದುಕಿ ಅತ್ತಳು ಕಾಸಿಗೆ, ಕೆಟ್ಟ ಪೈರಿಗೆ, ಸತ್ತ ಕರುವಿಗೆ; ಎಷ್ಟು ಸಲ ಹುಡುಕುತ್ತ ಊರೂರು ಅಲೆದಳು ತಪ್ಪಿಸಿಕೊಂಡ ಮುದಿಯ ಎಮ್ಮೆಗೆ?
ಸತಿಸಾವಿತ್ರಿ, ಜಾನಕಿ, ಊರ್ಮಿಳೆಯಲ್ಲ; ಚರಿತ್ರೆ ಪುಸ್ತಕದ ಶಾಂತ, ಶ್ವೇತ, ಗಂಭೀರೆಯಲ್ಲ; ಗಾಂಧೀಜಿ, ರಾಮಕೃಷ್ಣರ ಸತಿಯರಂತಲ್ಲ; ದೇವರ ಪೂಜಿಸಲಿಲ್ಲ; ಹರಿಕತೆ ಕೇಳಲಿಲ್ಲ; ಮುತ್ತೈದೆಯಾಗಿ ಕುಂಕುಮ ಕೂಡ ಇಡಲಿಲ್ಲ.
ಬನದ ಕರಡಿಯ ಹಾಗೆ ಚಿಕ್ಕಮಕ್ಕಳ ಹೊತ್ತು ಗಂಡನ್ನ ಸಾಕಿದಳು ಕಾಸು ಗಂಟಿಕ್ಕಿದಳು ನೊಂದ ನಾಯಿಯ ಹಾಗೆ ಬೈದು, ಗೊಣಗಿ, ಗುದ್ದಾಡಿದಳು;
ಸಣ್ಣತನ, ಕೊಂಕು, ಕೆರೆದಾಟ ಕೋತಿಯ ಹಾಗೆ; ಎಲ್ಲಕ್ಕೆ ಮನೆತನದ ಉದ್ಧಾರ ಸೂತ್ರ. ಈಕೆ ಉರಿದೆದ್ದಾಳು ಮಗ ಕೆಟ್ಟರೆ, ಗಂಡ ಬೇರೆ ಕಡೆ ಹೋದಾಗ ಮಾತ್ರ.
ಬನದ ಕರಡಿಗೆ ನಿಮ್ಮ ಭಗವದ್ಗೀತೆ ಬೇಡ; ನನ್ನವ್ವ ಬದುಕಿದ್ದು ಕಾಳುಕಡ್ಡಿಗೆ, ದುಡಿತಕ್ಕೆ, ಮಕ್ಕಳಿಗೆ; ಮೇಲೊಂದು ಸೂರು, ಅನ್ನ, ರೊಟ್ಟಿ, ಹಚಡಕ್ಕೆ; ಸರೀಕರ ಎದುರು ತಲೆಯೆತ್ತಿ ನಡೆಯಲಿಕ್ಕೆ.
ಇವಳಿಗೆ ಮೆಚ್ಚುಗೆ, ಕೃತಜ್ಞತೆಯ ಕಣ್ಣೀರು; ಹೆತ್ತದ್ದಕ್ಕೆ, ಸಾಕಿದ್ದಕ್ಕೆ; ಮಣ್ಣಲ್ಲಿ ಬದುಕಿ, ಮನೆಯಿಂದ ಹೊಲಕ್ಕೆ ಹೋದಂತೆ ತಣ್ಣಗೆ ಮಾತಾಡುತ್ತಲೇ ಹೊರಟು ಹೋದುದಕ್ಕೆ.
~
ಪಾರ್ವತಿದೇವಿ ಕೊಳೆಯಿಂದ ಕೂಡಿದ ತನ್ನ ಮೈಯ ಬೆವರಿಂದಲೇ ಗೊಂಬೆ ಮಾಡಿ ಅದಕ್ಕೆ ಜೀವ ಕೊಟ್ಟಳು; ಆತನೇ ಗಣಪತಿ ಎಂಬ ಕಥೆಯೊಂದು ಬರುತ್ತದೆ. ಕೃಷಿ ಸಂಸ್ಕೃತಿಯ ಮನಸ್ಸು ತಾಯಿ ಮತ್ತು ಮಗುವಿನ ಸಂಬಂಧವನ್ನು ರೂಪಕಗೊಳಿಸಿರುವ ಬಗೆಗಿನ ಅನನ್ಯ ನಿದರ್ಶನ ಈ ಕಥೆ.
ಲಂಕೇಶರ 'ಅವ್ವ' ಕವಿತೆಯನ್ನು ಓದಿಕೊಳ್ಳುವಾಗೆಲ್ಲ, ಈ ಕಥೆಯೊಳಗಿನ ನೆಲದ ಗುಣವೇ ತಾನಾಗಿರುವ ಅವ್ವ ಕಾಣುತ್ತಾಳೆ. ಈ ಅವ್ವ ತನ್ನ ಸಂತಾನವನ್ನು ತನ್ನ ಬೆವರಿಂದಲೇ ಬಾಳಿಸುವವಳು. ನೆಲ, ಕೃಷಿ, ದುಡಿಮೆ, ಕುಟುಂಬ ಹೀಗೆ ಸಾಂದ್ರವಾದ ತನ್ಮಯತೆಯ ಹರಿವು, ಹರಹು ಆಕೆ.
'ನನ್ನವ್ವ ಫಲವತ್ತಾದ ಕಪ್ಪು ನೆಲ' ಎಂಬುದೇ ಒಂದು ಬೆಳಕಿನ ಸಾಕ್ಷಾತ್ಕಾರದ ಹಾಗಿದೆ. ನೆಲವನ್ನು ಬಿಟ್ಟು ಬದುಕಿಲ್ಲ; ಹಾಗೇ ತಾಯಿಯಿದ್ದರೇನೇ ಸಾತತ್ಯ. ಶ್ರಮ ಸಂಸ್ಕೃತಿಯನ್ನೂ ಮಾತೃ ಪರಂಪರೆಯನ್ನೂ ಒಂದೆಡೆಯಲ್ಲಿ ಕಂಡುಕೊಳ್ಳುವ ಪ್ರತಿಮೆ ಇದು.
"ಅಲ್ಲಿ ಹಸಿರು ಪತ್ರದ ಹರವು, ಬಿಳಿಯ ಹೂ ಹಬ್ಬ; ಸುಟ್ಟಷ್ಟು ಕಸುವು, ನೊಂದಷ್ಟೂ ಹೂ ಹಣ್ಣು ಮಕ್ಕಳೊದ್ದರೆ ಅವಳ ಅಂಗಾಂಗ ಪುಲಕ"
ಈ ಕಥೆ, ಮಗುವಿಗೆ ಹಾಲೂಡಿದರೆ ಎದೆ ಬಿಗುವು ಸೋರಿಹೋದೀತು ಎಂದು ಆತಂಕಗೊಳ್ಳುವ 'ಪೇಜ್ ಥ್ರೀ' ಮಮ್ಮಿಯದ್ದಲ್ಲ; ಬದಲಾಗಿ ನಿರಂತರ ಜೀವ ತೇಯುವ, ಎಲ್ಲ ನೋವನ್ನೂ ಒಂದು ನಿಟ್ಟುಸಿರಲ್ಲೇ ನುಂಗಿಕೊಳ್ಳುವ ಶಕ್ತಿವಂತೆಯದ್ದು. ಮಗು ಪಡುವ ಅನೂಹ್ಯ ಸುಖದಲ್ಲೇ ಅವಳ ತಾಯ್ತನದ ಚೆಲುವು ಪುಳಕ ಗಳಿಸುತ್ತದೆ.
"ಹೊತ್ತ ಬುಟ್ಟಿಯ ಇಟ್ಟು ನರಳಿ ಎವೆ ಮುಚ್ಚಿದಳು ತೆರೆಯದಂತೆ"
-ಹೀಗೆ ಯಾನ ಮುಗಿಸುವ ಅವ್ವ, ಅನ್ನ ಕೊಡುವ ಹೊಲದ ಕಸುವಿಗಾಗಿ, ಜೀವನದ ಜೊತೆಗಾರನ ಸಂತೋಷಕ್ಕಾಗಿ ತನ್ನದೆಂಬುವ ಪ್ರತಿ ಕ್ಷಣವನ್ನೂ ಒತ್ತೆಯಿಟ್ಟಿದ್ದವಳು. 'ಹೂವಲ್ಲಿ ಹೂವಾಗಿ, ಕಾಯಲ್ಲಿ ಕಾಯಾಗಿ' ದುಡಿಮೆಯಲ್ಲಿ ತಾದಾತ್ಮ್ಯ ಸಾಧಿಸಿದ ಅವಳದ್ದು ನಿಸ್ವಾರ್ಥ ಪಯಣ: 'ಯೌವನವ ಕಳೆದವಳು ಚಿಂದಿಯ ಸೀರೆ ಉಟ್ಟುಕೊಂಡು'.
ಇವಳು ಕಣ್ಣೀರಿಟ್ಟಿದ್ದು ದಾರಿದ್ರ್ಯದ ದಣಿವಿನಲ್ಲಿ, ಕೈಗೆ ಫಸಲು ಬಾರದ ದುಃಖದಲ್ಲಿ, ಮನೆಯೊಳಗಿನ ಕರು ಸತ್ತು ಹೋದದ್ದರ ಕುರಿತ ತೀವ್ರ ಯಾತನೆಯಲ್ಲಿ. ಹಟ್ಟಿಯ ಮುದಿಯೆಮ್ಮೆ ತಪ್ಪಿಸಿಕೊಂಡಾಗೆಲ್ಲ ಪ್ರಾಣವನ್ನೇ ಹುಡುಕುವವಳ ಧಾವಂತದಲ್ಲಿ ಊರೂರು ಅಲೆದ ಈ ಅವ್ವ ಒಂದು ಕಾಳಜಿ, ಒಂದು ಕಳಕಳಿ, ಒಂದು ಸಂಸ್ಕೃತಿ, ಒಂದು ಪರಂಪರೆ.
ಹಾಗೆಂದು ಸತಿ ಸಾವಿತ್ರಿಯಂಥವರ ಆದರ್ಶವೇನೂ ಇವಳ ಮುಂದಿರಲಿಲ್ಲ. ಅದರ ಗರಜೂ ಇವಳಿಗಿರಲಿಲ್ಲ. ತನ್ನದೇ ಧಾಟಿಯಲ್ಲಿ ಬದುಕಿನ ಹಾಡು ಹಾಡಿದವಳು. ಅತ್ಯಂತ ಸಹಜವಾಗಿ, ಎಲ್ಲ ಸಿಟ್ಟು, ಸೆಡವು, ಸಣ್ಣತನಗಳ ಕಂತೆಯೇ ಆಗಿ ಬಾಳ ದಾರಿ ನಡೆದವಳು. ಆದರೆ ಅದೆಲ್ಲದರ ಹಿಂದೊಂದು ಸೂತ್ರವಿತ್ತು:
"ಎಲ್ಲಕ್ಕೆ ಮನೆತನದ ಉದ್ಧಾರ ಸೂತ್ರ ಈಕೆ ಉರಿದೆದ್ದಾಳು ಮಗ ಕೆಟ್ಟರೆ, ಗಂಡ ಬೇರೆ ಕಡೆ ಹೋದಾಗ ಮಾತ್ರ."
ಯಾವುದೇ ಸಂಗತಿಯ ಮೇಲೆ ಇಂಥದೊಂದು ಪೊಸೆಸಿವ್ ಆದ ಒಳಗೊಳ್ಳುವಿಕೆ ಸಾಧ್ಯವಾಗುವುದು ಅದರ ಕುರಿತ ನಿಷ್ಕಳಂಕ ಪ್ರೀತಿಯಿಂದ ಮಾತ್ರ. ಇದು ಸೋಗಿನ ಹಂಗು ಬೇಡುವುದಿಲ್ಲ. ಎಲ್ಲರಿಗೂ ಕೋಲೆ ಬಸವನ ಹಾಗೆ ಹೂಂ ಹೂಂ ಎನ್ನುತ್ತ, ಎಲ್ಲರನ್ನೂ ಮೆಚ್ಚಿಸುತ್ತ ತನ್ನ ಒಳ್ಳೆಯತನವನ್ನು ಸ್ಥಾಪಿಸಲು ಹೊಂಚುವುದಿಲ್ಲ. ಬದಲಾಗಿ, ಸಿಟ್ಟು ಅಥವಾ ದ್ವೇಷವನ್ನು ಎದುರಿಸುವುದಾದರೂ ಸರಿಯೆ, ಸತ್ಯದ ಅಲಗಿಗೆ ಒಡ್ಡಿಕೊಳ್ಳಬೇಕು ಎಂಬ ಸ್ವಾಭಿಮಾನದ ದೃಢತೆಯೊಂದಿಗಿರುತ್ತದೆ. ಅವ್ವ ಅಂಥವಳಾಗಿದ್ದವಳು.
"ಬನದ ಕರಡಿಗೆ ನಿಮ್ಮ ಭಗವದ್ಗೀತೆ ಬೇಡ; ನನ್ನವ್ವ ಬದುಕಿದ್ದು ಕಾಳು ಕಡ್ಡಿಗೆ ದುಡಿತಕ್ಕೆ, ಮಕ್ಕಳಿಗೆ; ಮೇಲೊಂದು ಸೂರು, ರೊಟ್ಟಿ, ಹಚಡಕ್ಕೆ ಸರೀಕರ ಎದುರು ತಲೆಯೆತ್ತಿ ನಡೆಯಲಿಕ್ಕೆ."
ಬದುಕುವುದಕ್ಕೆ ಯಾವುದೇ ಉದಾತ್ತವಾದ ನೆಪಗಳು ಬೇಕಿಲ್ಲ. ಶ್ರಮ ಸಂಸ್ಕೃತಿಯ ತಳಪಾಯವೇ, 'ಶರೀರ ನಶ್ವರ' ಎಂಬ ಆತ್ಮವಂಚಕ ನಿಲುವಿನಿಂದ ದೂರ ಕಾಯ್ದುಕೊಳ್ಳುವುದು. ಅಸ್ತಿತ್ವದ ಪ್ರಶ್ನೆಯಲ್ಲೇ ಸತ್ಯದ ಬೆಳಕಿಗಾಗಿ ಕಾಯುವುದು. ಇರುವಷ್ಟು ದಿನ ತಲೆ ಬಾಗದೆ ಬದುಕುವ ಬಲವನ್ನು ಹಂಬಲಿಸುವುದು. ಹೀಗೆ ದುಡಿಮೆಯೊಂದಿಗೆ ಅವಿನಾಭಾವವೆಂಬಂತೆ ಒಂದಾಗಿ ಹೋಗಿದ್ದ ಅವ್ವ, ದುಡಿಯುತ್ತ ದುಡಿಯುತ್ತಲೇ ಸಾವಿನ ಬಾಗಿಲಲ್ಲೂ ನಿರಾಯಾಸವಾಗೇ ನಡೆದುಬಿಡುತ್ತಾಳೆ. 'ಮನೆಯಿಂದ ಹೊಲಕ್ಕೆ ಹೋದಂತೆ ತಣ್ಣಗೆ ಮಾತಾಡುತ್ತಲೇ' ಹೊರಟು ಹೋಗುತ್ತಾಳೆ.
ಅಷ್ಟೊಂದು ತೀವ್ರವಾಗಿ ಬದುಕಿದ್ದ ಅವ್ವ ಮತ್ತು ಹಾಗೆ ನಿರಾಳವಾಗಿ ಸಾವಿನೊಳಗೆ ನಡೆದುಬಿಟ್ಟ ಅವ್ವ -ಈ ಎರಡೂ ಚಿತ್ರಗಳು ಬಹುವಾಗಿ ಕಾಡುತ್ತವೆ. ಆರ್ದ್ರವಾದ ಸಂಬಂಧವೊಂದರ ಅಗಲುವಿಕೆಗೂ ಕರಗಿ ಕಣ್ಣೀರಾಗದವರ ಕಾಲದಲ್ಲಿ, ಅವ್ವ ಅದೊಂದು ಮುದಿಯೆಮ್ಮೆಗಾಗಿ, ಸತ್ತ ಕರುವಿಗಾಗಿ ಅಳುತ್ತ ಕೂತದ್ದು ಕಾಣಿಸುತ್ತದೆ.
ಬಹುಶಃ ಎಲ್ಲ ಅಳುವಿನ ಚಿತ್ರಗಳಲ್ಲೂ ಅವ್ವ ಮಸುಕು ಮಸುಕಾಗಿ ಇದ್ದೇ ಇರುತ್ತಾಳೆ.
~
ಲಂಕೇಶರು ಅವ್ವನನ್ನು, ತಾಯಗುಣವನ್ನು ಹಸಿರು ಪತ್ರ ಮತ್ತು ಬಿಳಿಯ ಹೂವಿನ ಜೊತೆಗಿನ ಜೀವನಸಿರಿ ಮತ್ತು ಸಡಗರಕ್ಕೆ ಸಂವಾದಿಯಾಗಿ ಕಾಣುತ್ತಾರೆ. ನೆಲ ಅನುಭವಿಸುವ ಋತುಗಳೆಲ್ಲವನ್ನೂ ಅವ್ವ ಅನುಭವಿಸುತ್ತಾಳೆ. ಇಲ್ಲಿ ಅನುಭವಿಸುವುದೆಂದರೆ ಸುಖಪಡುವುದಲ್ಲ; ಸುಖವನ್ನು ಧಾರೆಯೆರೆಯುವುದು. ಹಾಗೆಯೇ ಕಷ್ಟವನ್ನು, ಕ್ಷೋಭೆಯನ್ನು ತನ್ನೊಳಗೇ ಅರಗಿಸಿಕೊಳ್ಳುವುದು. ಮಣ್ಣಲ್ಲಿ ಬದುಕಿದ ಅವ್ವನದು ತೇವದ ಗುಣ; ತಂಪೆರೆಯುವ ಗುಣ; ಕಾಯುವ ಗುಣ.
ತಾವು ಕಂಡುದನ್ನು ಪ್ರಕೃತಿಯ ಸಮೀಪವಿಟ್ಟೇ ಕಾಣಿಸುವುದು, ಭಾವನಾತ್ಮಕವಾದದ್ದನ್ನು ಒಂದು ಘಳಿಗೆಯ ಮಟ್ಟಿಗಾದರೂ ಎಲ್ಲ ಉದ್ವೇಗಗಳ ಆಚೆಗೆ ಕೈಚಾಚುವ ಆಸೆಯಿಂದೆಂಬಂತೆ ಮತ್ತು ಅಲ್ಲಿಯೇ ಬದುಕು ನಿಜವಾಗಿಯೂ ಕಾದಿದೆ ಎಂಬ ವಿಶ್ವಾಸದಿಂದ ಸ್ವರಗೊಳಿಸುವುದು ಲಂಕೇಶರ ಬರವಣಿಗೆಯಲ್ಲಿನ ಒಂದು ಧಾರೆಯೂ ಹೌದು. ಇಡೀ ಬದುಕನ್ನೇ ಪ್ರಭಾವಿಸಿದ ಅವ್ವ ಆ ಬದುಕಿನ ಅಂತರಾಳದಲ್ಲೂ ತನ್ನಷ್ಟೇ ಎತ್ತರ ಬೆಳೆದು ನಿಲ್ಲುತ್ತಾಳೆ. ಪ್ರಕೃತಿಗೆ ಹತ್ತಿರವಾಗಿ ಬಾಳುವಾಗ, ನಿಜವಾಗಿಯೂ ಅನಗತ್ಯವಾದುದರ ಕುರಿತ ನಿರಾಕರಣೆಯೊಂದಿಗೇ ಅವ್ವ ಸಾಮಾನ್ಯ ಕಟ್ಟುಪಾಡುಗಳನ್ನು ದಾಟಿ ನಿಲ್ಲುತ್ತಾಳೆ. 'ಬನದ ಕರಡಿಗೆ ನಿಮ್ಮ ಭಗವದ್ಗೀತೆ ಬೇಡ' ಎಂದು ಕವಿ ಹೇಳುವಾಗ, ಅದು ಅವ್ವ ಹೇಳಿಕೊಟ್ಟ ಬದುಕಿನ ಧ್ಯಾನದಲ್ಲಿ ಕಂಡುಕೊಂಡ ಸತ್ಯವೇ ಆಗಿದೆ.
ಅವ್ವ ಇಲ್ಲಿ ಒಂದು ಸಂಸಾರದ ನೊಗ ಹೊತ್ತವಳು ಮಾತ್ರವಾಗಿರದೆ, ಒಂದು ಪೀಳಿಗೆಯ ಬದುಕನ್ನೇ ತಿದ್ದಿ ತೀಡಿದ ಶಿಲ್ಪಿಯೂ ಆಗಿದ್ದಾಳೆ. ಅವಳು ಬಿಸಿಲೊಳಗೆ ಕರಗುತ್ತಲೇ ಜೀವಿಸಿದವಳು. ಜೀವನಕ್ಕಾಗಿ ಬಿಸಿಲನ್ನೇ ಕರಗಿಸುವ ಕಠಿಣ ದಾರಿಯನ್ನೂ ಉತ್ತರಿಸಿದವಳು. ಈ ಕರಗುವಿಕೆ ಮತ್ತು ಕರಗಿಸುವಿಕೆಯ, ಆರ್ದ್ರಗೊಳ್ಳುವುದು ಮತ್ತು ಆರ್ದ್ರಗೊಳಿಸುವುದರ ಅನವರತ ತುಡಿತ, ತಳಮಳ, ಗುದ್ದಾಟಗಳಲ್ಲೇ ಅವ್ವ ಬದುಕಿದ್ದಾಳೆ. ಬಹುಶಃ ಎಲ್ಲ ಕಾಲದಲ್ಲೂ ನಿಜದ ಕಡೆಗೆ ನಡೆಯುವುದಕ್ಕಾಗಿನ ಉಲ್ಲಂಘನೆಯಾಗಿ ಅವ್ವ ಉರಿದೇಳುವವಳೇ.










